ತಿರುನೆಲ್ವೇಲಿ
	ತಮಿಳುನಾಡಿನ ಒಂದು ಜಿಲ್ಲೆ ; ತಾಲ್ಲೂಕು ; ಅವುಗಳ  ಮುಖ್ಯಸ್ಥಳ.  ಜಿಲ್ಲೆಯ ಉತ್ತರದಲ್ಲಿ ರಾಮನಾಥಪುರಮ್ ಜಿಲ್ಲೆ  ಪೂರ್ವದಲ್ಲಿ ಬಂಗಾಳ ಕೊಲ್ಲಿ.  ನೈಋತ್ಯದಲ್ಲಿ ಕನ್ಯಾಕುಮಾರಿ ಜಿಲ್ಲೆ ಮತ್ತು ಪಶ್ಚಿಮದಲ್ಲಿ ಕೇರಳಕ್ಕೆ ಸೇರಿದ ಪಶ್ಚಿಮ ಘಟ್ಟದ ದಕ್ಷಿಣ ತುದಿಯ ಬೆಟ್ಟಗಳ ಸಾಲುಗಳು ಇವೆ.  ವಿಸ್ತೀರ್ಣ 11,433 ಚ.ಕಿಮೀ., ಜನಸಂಖ್ಯೆ 32,00,515 (1971).  ಈ ಜಿಲ್ಲೆಯಲ್ಲಿ ಹರಿಯುವ ಅನೇಕ ನದಿಗಳಲ್ಲಿ ತಾಮ್ರಪರ್ಣಿ ಮುಖ್ಯವಾದ್ದು.  ಈ ಜಿಲ್ಲೆ ಬತ್ತ, ರಾಗಿ, ಸೇಂಗ, ಹತ್ತಿ ಮೊದಲಾದ ಬೆಳೆಗಳಿಗೂ ಕೈಮಗ್ಗದ ಬಟ್ಟೆಗಳಿಗೂ ಪ್ರಸಿದ್ಧ ಪಡೆದಿದೆ.  ಅನೇಕ ಸ್ಥಳಗಳಲ್ಲಿ ಹತ್ತಿಯ ಗಿರಣಿಗಳಿವೆ ;  ಅವುಗಳಲ್ಲಿ ಕೋಯಿಲ್‍ಪಟ್ಟಿ ಮತ್ತು ತೂತ್ತುಕುಡಿ ಮುಖ್ಯವಾದವು.  ಇಲ್ಲಿ ಉಪ್ಪಿನ ತಯಾರಿಕೆಯೂ ಒಂದು ಮುಖ್ಯ ಉದ್ಯಮ.  ಜಿಲ್ಲೆಯ ದಕ್ಷಿಣ ಭಾಗದಲ್ಲಿ ತಾಳೆ ಜಾತಿಯ ಮರಗಳು ಹೆಚ್ಚಾಗಿ ಬೆಳೆಯುತ್ತವೆ. 

	ಈ ಜಿಲ್ಲೆಯಲ್ಲಿ ಸೂಕ್ಷ್ಮ ಶಿಲಾಯುಗಕ್ಕೆ ಸಂಬಂಧಿಸಿ (ಕ್ರಿ. ಪೂ. ಸು 6000) ಕೆತ್ತುವ, ಕೊರೆಯುವ ಉಪಕರಣಗಳು ದೊರಕಿವೆ.  ತಾಮ್ರಪರ್ಣಿಯ ದಡದಲ್ಲಿ ಕಬ್ಬಿಣ ಯುಗದ ಮಡಕೆ ಸಮಾಧಿಗಳು ಇವೆ.  ಈ ಮಡಕೆಗಳು ದುಂಡಗಿದ್ದು ಸುಮಾರು ಮೂರು ಅಡಿ ಎತ್ತರದ ಏಕಪಾದದ ದೊಡ್ಡ ಪಾತ್ರೆಗಳಾಗಿವೆ.  ಕಲ್ಲುಚಪ್ಪಡಿಗಳಿಂದ ಮುಚ್ಚಲಾದ ಈ ಸಮಾಧಿಗಳಲ್ಲಿ ಮಣ್ಣಿನ ಮಡಕೆಗಳು, ಕಂಚಿನ ಪಾತ್ರೆಗಳು, ಸುವರ್ಣಾಭರಣಗಳು ದೊರಕಿವೆ.  ಇವುಗಳಲ್ಲಿ ಆದಿಚನಲ್ಲೂರ್ (ನೋಡಿ- ಆದಿಚನಲ್ಲೂರು) ಕುಣಿಗಳು ಮುಖ್ಯವಾದುವು.  ಇವು ಮದ್ರಾಸ್ ಬಳಿಯ ಪಲ್ಲಾವರಮ್‍ನಲ್ಲಿ ದೊರೆತ ಕುಣಿಗಳಂತೆಯೇ ಇವೆ.  ಕಬ್ಬಿಣದ ಯುಗಕ್ಕೆ ಸಂಬಂಧಿಸಿದ ಈ ಕುಣಿಗಳ ಕಾಲ ಕ್ರಿ . ಪೂ. ಸು. 1000ರಿಂದ ಕ್ರಿಸ್ತಶಕದ ಆರಂಭದ ವರೆಗೆ ಹರಡಿಕೊಂಡಿದೆ. 

	ಈ ಜಿಲ್ಲೆಯ ಇತಿಹಾಸ ಕ್ರಿ. ಪೂ. ಸು. 3ನೆಯ ಶತಮಾನದಷ್ಟು ಹಿಂದಿನದು.  ಇಲ್ಲಿಯ ವೀರಶಿಖಾಮಣಿ ಹಾಗೂ ಮರುಕಾಚ್ ತಲೈಗಳಲ್ಲಿ ಬ್ರಾಹ್ಮೀಲಿಪಿಗಳು ದೊರತಿವೆ.  ವೀರಶಿಖಾಮಣಿಯ ಬಳಿಯಲ್ಲಿರುವ ತಿರುಮಲೈಪುರಮ್‍ನಲ್ಲಿರುವ ಸು. 5ನೆಯ ಶತಮಾನದ (ಪಾಂಡ್ಯರ ಕಾಲ) ಗುಹಾದೇವಾಲಯದಲ್ಲಿ ಸುಂದರ  ಶಿಲ್ಪಗಳೂ ಪುರಾತನ ಚಿತ್ರಗಳೂ ಇವೆ.  ಈ ಜಿಲ್ಲೆ ಕ್ರೈಸ್ತಮತಪ್ರಚಾರದ ಒಂದು ಮುಖ್ಯ ಕ್ಷೇತ್ರ .  1532 ರಿಂದಲೂ ಇಲ್ಲಿ ಮಿಷನರಿಗಳ ಚಟುವಟಿಕೆ ಇದ್ದದ್ದು ಕಂಡುಬರುತ್ತದೆ.  ಜಿಲ್ಲೆಯಲ್ಲಿ ಮುಸಲ್ಮಾನರ ಪುರಾತನ ಕಟ್ಟಡಗಳೂ ಉಂಟು.  1634 ರ ಪೊಟ್ಟಲ್‍ಪುದೂರ್ ಮಸೀದಿ ಹಿಂದೂ ವಾಸ್ತು ರೀತಿಯಲ್ಲಿ ನಿರ್ಮಿತವಾಗಿರುವುದು ಒಂದು ವೈಶಿಷ್ಟ್ಯ.  ಕಳಕ್ಕಾಡು, ಪಾಳೆಯಮ್ ಕೋಟ್ಟೈ ಮೊದಲಾದ ಸ್ಥಳಗಳಲ್ಲಿ ಕೋಟೆಗಳ ಅವಶೇಷಗಳುಂಟು.  ಸು. 18ನೆಯ ಶತಮಾನದ ಕೊನೆಯಲ್ಲಿ ಕಟ್ಟಿದ ಕೋಟೆಯೊಂದು ಪಾಂಚಾಲಂಕುರಿಚ್ಚಿಯಲ್ಲಿತ್ತು.  ಇದು ಪಾಳೆಯಗಾರರ ಯುದ್ಧದಲ್ಲಿ ಹಾಳಾಯಿತು. ಕಟ್ಟಬೊಮ್ಮನ್ ಎಂಬ ಪ್ರಖ್ಯಾತ ವೀರ ಕೋಟೆಯಲ್ಲಿದ್ದು ಅಧಿಕಾರ ನಡೆಸಿದನೆನ್ನಾಲಾಗಿದೆ. 

	ತಿರುನೆಲ್ವೇಲಿ, ತೂತ್ತುಕುಡಿ (1,55,310), ಪಾಪನಾಶಮ್, ಪಾಳೆಯಮ್ ಕೋಟ್ಟೈ (70,070) ಈ ಜಿಲ್ಲೆಯ ಪ್ರಸಿದ್ಧ ಸ್ಥಳಗಳು.  ತೂತ್ತುಕುಡಿ ತಮಿಳುನಾಡಿನ ಎರಡನೆಯ ಬಂದರು.  ತಾಮ್ರಪರ್ಣಿ ನದೀ ಮುಖಜಭೂಮಿಯಲ್ಲಿರುವ ಕೋಲ್‍ಕೆ ಮತ್ತು ಕಾಯಲ್ ಇವು  ಪಾಂಡ್ಯರಾಜ್ಯದ ಮುಖ್ಯ ರೇವುಪಟ್ಟಣಗಳಾಗಿದ್ದುವು.  ತಿರುನೆಲ್ವೇಲಿ, ತೆಂಕಾಶಿ ಪಾಪನಾಶಮ್ ಮತ್ತು ತಿರುಕ್ಕುರಾಲಮ್ ಮುಂತಾದವು ಈ ಜಿಲ್ಲೆಯ ಶೈವಕ್ಷೇತ್ರಗಳಾದರೆ ಶ್ರೀ ವೈಕುಂಠಮ್, ಆಪ್ವಾರ್ ತಿರುನಗರಿ ಮತ್ತು ನಂಗುನೇರೆ- ಇವು ವೈಷ್ಣವ ಕ್ಷೇತ್ರಗಳು.  Wರುಚ್ಚೆಂದೂರು (ನೋಡಿ- ತಿರುಚ್ಚೆಂದೂರ್)  ಹಾಗೂ ಕ¿್ಗಮಲೈ ಇವು ಸುಬ್ರಹ್ಮಣ್ಯ ಕ್ಷೇತ್ರಗಳು.  ಕುರ್ತಾಲಂ ಜಲಪಾತ ಅನೇಕ ಪ್ರವಾಸಿಗಳನ್ನು ಆಕರ್ಷಿಸುತ್ತದೆ.  ಮುಂಡಂತುರೈ ಹುಲಿಗಳ ಅಭಿವೃದ್ಧಿಗಾಗಿಯೇ ಮೀಸಲಾಗಿ ಇಡಲಾದ ಅಭಯಾರಣ್ಯ.
(ಪಿ.ಆರ್.ಎಸ್.)

	ತಿರುನೆಲ್ವೇಲಿ ಪಟ್ಟಣ ಜಿಲ್ಲೆಯ ಆಡಳಿತ ಕೇಂದ್ರ.  ತಾಮ್ರಪರ್ಣಿ ನದಿಯ ಎಡದಂಡೆಯ ಮೇಲಿದೆ.  ಜನಸಂಖ್ಯೆ 1,08,498 (1971).  ತಾಮ್ರಪರ್ಣಿಯ ಬಲದಂಡೆಯಲ್ಲಿರುವ ಪಾಳೆಯಂಕೋಟ್ಟೈ ಈಗ ತಿರುನೆಲ್ವೇಲಿ ನಗರಪ್ರದೇಶಕ್ಕೆ, ಸೇರಿದೆ.  ತೀವ್ರವಾಗಿ ಬೆಳೆಯುತ್ತಿರುವ ತಿರುನೆಲ್ವೇಲಿಯ ನಗರಪ್ರದೇಶದ ಒಟ್ಟು ಜನಸಂಖ್ಯೆ 2,66,688 (1971).  ತಿರುನೆಲ್ವೇಲಿಯಲ್ಲಿರುವ ನೆಲ್ಲಯ್ಯಪ್ಪರ್  ಶಿವಾಲಯ ವಾಸ್ತುಶಿಲ್ಪದ ದೃಷ್ಟಿಯಿಂದ ಗಮನಾರ್ಹವಾದ್ದು. ಇದರ ಗೋಪುರಗಳು ಮತ್ತು ಕಂಬಗಳಿಂದ ಕೂಡಿದ ಮಂಟಪಗಳು ಪಾಂಡ್ಯ ಮತ್ತು ಮದುರೈ ನಾಯಕರ ಕಾಲದವು.  ದೇವಾಯಲದ ಹಜಾರ ತುಂಗ ಸುಂದರವಾದುದು.  ಈ ಬಗೆಯ ಕಟ್ಟಡಗಳಲ್ಲಿ ಇದೇ ಪುರಾತನವಾದ್ದೆಂದು ಹೇಳಲಾಗಿದೆ.  ರಾಮೇಶ್ವರದಲ್ಲಿರುವ ದೇವಾಯಲಯವೂ ಇದೇ ಮಾದರಿಯದು. 

	ತಿರುನೆಲ್ವೇಲಿ ಮತ್ತು ಪಾಳಯಂಕೋಟ್ಟೈಯಲ್ಲಿ ಎತ್ತರದ ಚೂಪುಗೋಪುರವುಳ್ಳ ಅನೇಕ ಚರ್ಚುಗಳಿವೆ.  ಎಂ. ಡಿ.ಟಿ. ಹಿಂದೂ ಕಾಲೇಜು ಇಲ್ಲಿಯ ಒಂದು ಶಿಕ್ಷಣ ಸಂಸ್ಥೆ . ತಿರುನೆಲ್ವೇಲಿ ಒಂದು ಮುಖ್ಯ ವ್ಯಾಪಾರಸ್ಥಳ, ಮುರಮುಟ್ಟು, ಎಣ್ಣೆ, ಹತ್ತಿ ಮುಂತಾದವು ಇಲ್ಲಿ ಮಾರಾಟವಾಗುತ್ತವೆ. 				            (ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ